Playstore Icon
Download Jar App
Personal Finance

ಹಣಕಾಸಿನ ಸಾಕ್ಷರತೆಯಲ್ಲಿ ಲಿಂಗ ಅಂತರ ಮತ್ತು ನಾವು ಅದನ್ನು ಹೇಗೆ ನಿಭಾಯಿಸಬಹುದು - ಜಾರ್

December 27, 2022

ಸಮೀಕ್ಷೆಗಳು ಹೇಳುವ ಹಾಗೆ ಮಹಿಳೆಯರಿಗೆ ಹೋಲಿಸಿದರೆ ಪುರುಷರಿಗೆ ಹಣಕಾಸಿನ ವಿಚಾರದಲ್ಲಿ ಹೆಚ್ಚು ಜ್ಞಾನ ಇರುತ್ತದೆ. ಹಾಗಾದರೆ ಮಹಿಳೆಯರಿಗೆ ಹಣಕಾಸಿನ ಸಾಕ್ಷರತೆಗೆ ಕುಂದುಕೊರತೆಗಳೇನು? ತಿಳಿಯೋಣ ಬನ್ನಿ.

ಕಳೆದ ದಶಕದಿಂದ ಮಹಿಳೆಯರು ಪುರುಷರಿಗೆ ಹೋಲಿಸಿದರೆ ತಾವು ಸಹ ಯಾವುದರಲ್ಲೂ ಕಡಿಮೆ ಇಲ್ಲ ಎಂಬಂತೆ ಎಲ್ಲಾ ಕ್ಷೇತ್ರದಲ್ಲಿ ಅಗಣ್ಯ ಸಾಧನೆ ಮಾಡಿದ್ದಾರೆ. ಓದಿನಲ್ಲಿ, ಕೆಲಸದಲ್ಲಿ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಆದರೆ ಪುರುಷರಂತೆ ಸರಿಸಮಾನವಾಗಿ ಬೆಳೆಯಲು ಇನ್ನೂ ಸಹ ಹಲವಾರು ಆಯಾಮಗಳಲ್ಲಿ ಮಹಿಳೆ ಅಭಿವೃದ್ಧಿ ಕಾಣಬೇಕು. ಅದರಲ್ಲೂ ವಿಶೇಷವಾಗಿ ಹಣಕಾಸಿನ ವಿಚಾರದಲ್ಲಿ ಹೆಚ್ಚು ಜ್ಞಾನ ಪಡೆಯಬೇಕು ಮತ್ತು ಇದರಿಂದ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತದೆ.

ಇಂಟರ್ನ್ಯಾಷನಲ್ ನೆಟ್ವರ್ಕ್ ಆಫ್ ಫೈನಾನ್ಸಿಯಲ್ ಎಜುಕೇಶನ್, ಸಂಸ್ಥೆ ನಡೆಸಿದ ಅಧ್ಯಯನ ಹಾಗೂ ಸಂಶೋಧನೆಯಲ್ಲಿ ಪ್ರಪಂಚದಾದ್ಯಂತ ಇನ್ನೂ ಸಹ ಹೆಚ್ಚು ಶೇಕಡವಾರು ಮಹಿಳೆಯರು ಪುರುಷರಂತೆ ಹಣಕಾಸಿನ ಜ್ಞಾನ ಹಾಗೂ ತಿಳುವಳಿಕೆ ಪಡೆದುಕೊಳ್ಳಬೇಕಾದರೆ ಸಾಕಷ್ಟು ದೂರ ಕ್ರಮಿಸಬೇಕಾಗಿದೆ ಎಂದು ತಿಳಿದುಬಂದಿದೆ.

ನಮಗೆಲ್ಲ ಗೊತ್ತಿರುವ ಹಾಗೆ ಪುರುಷರಿಗೆ ಹೋಲಿಸಿದರೆ ಮಹಿಳೆಯರು ದೀರ್ಘಾಯುಷಿಗಳಾಗಿದ್ದು ಕಡಿಮೆ ಅವಧಿಯ ವೃತ್ತಿಪರ ಜೀವನವನ್ನು ಹೊಂದಿ ಕಡಿಮೆ ಆದಾಯ ಮತ್ತು ಪಿಂಚಣಿಯನ್ನು ಪಡೆಯುತ್ತಾರೆ.

ಇವುಗಳನ್ನೆಲ್ಲ ಗಮನಿಸಿದರೆ, ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹಣಕಾಸಿನ ವಿಷಯದಲ್ಲಿ ಸಾಕ್ಷರತೆ ಕಡಿಮೆ ಎನ್ನುವ ವಿಚಾರ ಎದ್ದುಕಾಣುತ್ತದೆ.

ಮಹಿಳೆಯರು ತಮ್ಮ ನಿವೃತ್ತಿ ವಯಸ್ಸಿಗೆ ಬರುತ್ತಿದ್ದ ಹಾಗೆ ಹಣಕಾಸಿಗೆ ಸಂಬಂಧಪಟ್ಟಂತೆ ತೊಂದರೆಗೆ ಒಳಗಾಗುತ್ತಾರೆ. ಏಕೆಂದರೆ ತಾವು ಜೀವಮಾನವಿಡಿ ಉಳಿಸಿದ ಹಣ ತುಂಬಾ ಕಡಿಮೆ ಇರುತ್ತದೆ.

ಅಧ್ಯಯನದಲ್ಲಿ ಬೆಳಕಿಗೆ ಬಂದ ಇನ್ನೊಂದು ವಿಷಯ ಎಂದರೆ ಮದುವೆಯಾಗದೆ ಉಳಿದಿರುವ ಅಥವಾ ಮದುವೆಯಾಗಿ ವಿಚ್ಛೇದನ ಪಡೆದುಕೊಂಡ ಮಹಿಳೆಯರು ತಮ್ಮ ನಿವೃತ್ತಿ ವಯಸ್ಸಿನಲ್ಲಿ ಶಾಶ್ವತ ಗಳಿಕೆಗೆ ಸಂಬಂಧಪಟ್ಟಂತೆ ಕಡಿಮೆ ಆದಾಯ ಹೊಂದಿರುತ್ತಾರೆ ಮತ್ತು ಈ ಸಮಯದಲ್ಲೂ ಕೂಡ ದುಡಿಯುವ ಅನಿವಾರ್ಯತೆ ಅವರಿಗೆ ಇರುತ್ತದೆ.

ಸಾಧಾರಣವಾಗಿ ಮಹಿಳೆಯರು ಸಂಪ್ರದಾಯಬದ್ಧವಾಗಿ ಹಣ ಹೂಡಿಕೆ ಮಾಡಲು ಮುಂದಾಗುತ್ತಾರೆ ಮತ್ತು ಹಣಕಾಸಿನ ವಿಚಾರದಲ್ಲಿ ಕಡಿಮೆ ಆತ್ಮವಿಶ್ವಾಸ ಹೊಂದಿರುತ್ತಾರೆ ಹೀಗಾಗಿ ಕೆಲವು ಸಂದರ್ಭಗಳಲ್ಲಿ ತೊಂದರೆಗೆ ಕೂಡ ಸಿಲುಕಬಹುದಾದ ಸಾಧ್ಯತೆ ಇರುತ್ತದೆ.

ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಕಡಿಮೆ ಜ್ಞಾನ ಹೊಂದಿರುವ ಕಾರಣದಿಂದಲೇ ಮಹಿಳೆಯರು ತಮ್ಮ ಜೀವನದಲ್ಲಿ ಅದರಲ್ಲೂ ವಿಶೇಷವಾಗಿ ತಮ್ಮ ನಿವೃತ್ತಿ ವಯಸ್ಸಿನ ಆಸುಪಾಸಿನಲ್ಲಿ ಕಡಿಮೆ ಹಣವನ್ನು ನೋಡುತ್ತಾರೆ ಎಂಬ ಸತ್ಯ ಅಧ್ಯಯನದ ಮೂಲಕ ಹೊರಬಂದಿದೆ.

ಒಪ್ಪಿಕೊಳ್ಳಲೇಬೇಕಾದ ಸತ್ಯ: ಹಣಕಾಸಿನ ವಿಷಯದಲ್ಲೂ ಸಹ ಪುರುಷರು ಮತ್ತು ಮಹಿಳೆಯರು ಎಂಬ ಭೇದಭಾವ!

ಚಿಕ್ಕವಯಸ್ಸಿನಿಂದಲೂ ಸಹ ಗಂಡು-ಹೆಣ್ಣು ಎನ್ನುವ ಭೇದಭಾವ ಪ್ರಪಂಚದಾದ್ಯಂತ ಮನೆಮಾಡಿದೆ. ಹೀಗಾಗಿ ಗಂಡು ಮಕ್ಕಳಿಗೆ ಸಿಗುವಂತಹ ವಿದ್ಯಾಭ್ಯಾಸದ ಮಟ್ಟ ಕೆಲವೊಮ್ಮೆ ಹೆಣ್ಣುಮಕ್ಕಳಿಗೆ ಸಿಗುವುದಿಲ್ಲ. ಇದು ಸಹ ಮಹಿಳೆಯರು ಜೀವನದಲ್ಲಿ ಕಡಿಮೆ ಹಣ ಮತ್ತು ಆದಾಯವನ್ನು ಹೊಂದುವಂತೆ ಮಾಡಬಹುದು. ಆದರೆ ಈ ಬಗ್ಗೆ ಪ್ರತಿಯೊಬ್ಬ ಪೋಷಕರು ಮೊದಲು ಗಮನವಹಿಸಿ ಮನೆಯಲ್ಲಿನ ಹೆಣ್ಣು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲು ಮುಂದಾಗಬೇಕು.

ಹೆಣ್ಣುಮಕ್ಕಳ ಅಭಿವೃದ್ಧಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವಾರು ಯೋಜನೆಗಳು ಸಹ ಇವೆ. ಈ ಬಗ್ಗೆ ಮಹಿಳೆಯರು ತಿಳಿದುಕೊಂಡು ಹಣ ಉಳಿತಾಯದ ಹಾಗೂ ಬಂಡವಾಳ ಹೂಡಿಕೆಯ ಮಾರ್ಗಗಳ ಬಗ್ಗೆ ಮಾಹಿತಿ ಹೊಂದುವುದು ಒಳ್ಳೆಯದು.

ಸಮಾಜದಲ್ಲಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಕೂಡ ಇರಬೇಕು ಮತ್ತು ಹಣಕಾಸಿನ ಗಳಿಕೆಗೆ ಮತ್ತು ಹೂಡಿಕೆಗೆ ಸಂಬಂಧಪಟ್ಟಂತೆ ಪುರುಷರಂತೆ ಉತ್ತಮ ನಿರ್ಧಾರ ಕೈಗೊಳ್ಳುವ ಹಾಗೆ ಆಕೆಗೆ ಅರಿವು ಮೂಡಿಸಬೇಕು. ಇದರಿಂದ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಆಕೆ ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

ಸಾಕಷ್ಟು ಮಹಿಳೆಯರಿಗೆ ಆರಂಭದಿಂದಲೇ ಶಿಕ್ಷಣಕ್ಕೆ ಕುಂದುಕೊರತೆ ಮಾಡಿ ಕೊನೆಗೆ ಮದುವೆಯಾದ ಮೇಲೆ ಕೇವಲ ಮನೆಕೆಲಸಕ್ಕೆ ಮಾತ್ರ ಸೀಮಿತ ಎನ್ನುವ ವಿಚಾರವನ್ನು ತಲೆಗೆ ತುಂಬಿ ಬಿಡುತ್ತಾರೆ. ಇದರಿಂದ ಮಹಿಳೆಯರು ಕೇವಲ ಇಂತಹ ಚೌಕಟ್ಟಿನಲ್ಲಿ ಮಾತ್ರ ಬದುಕಲು ಮುಂದಾಗುತ್ತಾರೆ. ಬ್ಯಾಂಕಿನಲ್ಲಿ ಹಣ ಉಳಿತಾಯ ಮಾಡುವ ಸಲುವಾಗಿ ಕನಿಷ್ಠ ತಮ್ಮದೇ ಆದ ಒಂದು ಉಳಿತಾಯ ಖಾತೆಯನ್ನು ಸಹ ಹೊಂದಿರುವುದಿಲ್ಲ ಅಥವಾ ತಮ್ಮ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಲು ಅರಿವು ಹೊಂದಿರುವುದಿಲ್ಲ.

ಇಂತಹ ಸಮಸ್ಯೆ ವಿಶೇಷವಾಗಿ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಕಂಡು ಬರುತ್ತಿದೆ. ಏಕೆಂದರೆ ಅಲ್ಲಿನ ಪರಿಸ್ಥಿತಿಗಳಲ್ಲಿ ಮಹಿಳೆಯರಿಗೆ ಹಣಕಾಸಿನ ನಿರ್ವಹಣೆಗೆ ಸಂಬಂಧಪಟ್ಟಂತೆ ಯಾವುದೇ ಹಕ್ಕನ್ನು ಪುರುಷರು ನೀಡಿರುವುದಿಲ್ಲ ಮತ್ತು ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗುವಂತೆ ಮಾಡಿರುತ್ತಾರೆ.

ಹಣಕಾಸು ಸಂಸ್ಥೆಯ ಸೇವೆಗಳು ಸಹ ಮಹಿಳೆಯರನ್ನು ತಲುಪಲು ಸಾಧ್ಯವಾಗದೇ ಇರಲು ಹಲವಾರು ಬೇರೆ ಬೇರೆ ಕಾರಣಗಳು ಕೂಡ ಇವೆ.

ಮಹಿಳೆಯರಿಗೆ ಹಣಕಾಸಿನ ನಿರ್ವಹಣೆಯಲ್ಲಿ ಕಡಿಮೆ ಅರಿವು ಇರಲು ಕಾರಣಗಳು

ಹಣಕಾಸು ಉದ್ಯಮ ನಿಯಂತ್ರಣ ಪ್ರಾಧಿಕಾರ, ಅಥವಾ FINRA ಸಂಸ್ಥೆಯಿಂದ ಮಾಡಲಾದ ಅಧ್ಯಯನದ ವರದಿಯಲ್ಲಿ ಹೇಳಿರುವ ಹಾಗೆ ಮಹಿಳೆಯರು ಹಣಕಾಸಿಗೆ ಸಂಬಂಧಿಸಿದಂತೆ ಪುರುಷರಿಗಿಂತ ಕಡಿಮೆ ಅರಿವು ಹೊಂದಿರುತ್ತಾರೆ.

ಶೇಕಡ 29% ಪುರುಷರಿಗೆ ಹೋಲಿಸಿದರೆ ಕೇವಲ 18% ಮಹಿಳೆಯರು ಮಾತ್ರ ಹಣ ಹೂಡಿಕೆಯ ಬಗ್ಗೆ ಹೆಚ್ಚಿನ ಮಟ್ಟದ ಜ್ಞಾನವನ್ನು ಪಡೆದಿರುತ್ತಾರೆ.

ಅಧ್ಯಯನದಲ್ಲಿ ಗಮನಿಸಿರುವ ಹಾಗೆ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರಿಗೆ ಹಣಕಾಸಿನ ಸ್ವಾತಂತ್ರ್ಯ ಕಡಿಮೆ ಇರುವ ಕಾರಣದಿಂದ ಇಂತಹ ಒಂದು ತೊಂದರೆಗೆ ಗುರಿಯಾಗಿದ್ದಾರೆ.

ಹಾಗಾದರೆ ಭವಿಷ್ಯದಲ್ಲಿ ಉತ್ತಮ ಹಣಕಾಸಿನ ನಿರ್ವಹಣೆಯ ಅರಿವಿಗೆ ಸಂಬಂಧಿಸಿದಂತೆ ಮಹಿಳೆಯರು ಎದುರಿಸುವ ಸವಾಲುಗಳೇನು? ಸಮೀಕ್ಷೆ ಈ ಬಗ್ಗೆ ಏನು ಹೇಳುತ್ತದೆ ನೋಡೋಣ ಬನ್ನಿ.

  • ಹಣಕಾಸಿನ ಸಂಸ್ಥೆ ಅಥವಾ ಬ್ಯಾಂಕ್ ಗೆ ಹೋಗಿಬರಲು ಅಂತರ ಹೆಚ್ಚಿರಬಹುದು ಅಥವಾ ತಾವು ಇರುವ ಪ್ರದೇಶದಿಂದ ಸರಿಯಾದ ಮಾರ್ಗ ಇಲ್ಲದೆ ಇರಬಹುದು.

  • ಸಮಾಜದ ದುರ್ಬಲ ಮಾರುಕಟ್ಟೆ ಸ್ಥಾನಮಾನ ಕೂಡ ಒಂದು ಕಾರಣ ಎಂಬುದನ್ನು ಮರೆಯಬಾರದು.

  • ಡಿಜಿಟಲ್ ರೂಪದಲ್ಲಿ ಹಣ ವರ್ಗಾವಣೆ ಬಗ್ಗೆ ಮಾಹಿತಿಯಾಗಲಿ ಅಥವಾ ವಿದ್ಯೆಯಾಗಲಿ ಇಲ್ಲದೆ ಇರುವುದು.

  • ಕೌಟುಂಬಿಕ ಕೆಲಸಗಳು ಮತ್ತು ಜವಾಬ್ದಾರಿಗಳು ಹೆಚ್ಚಾಗಿದ್ದು, ಹಣಕಾಸಿನ ನಿರ್ವಹಣೆಗೆ ಗಮನ ವಹಿಸಲು ಸಾಧ್ಯವಾಗದೆ ಇರಬಹುದು.

  • ಉತ್ತಮ ಹಣಕಾಸು ನಿರ್ವಹಣೆಗೆ ಆತ್ಮವಿಶ್ವಾಸದ ಮತ್ತು ಅಗತ್ಯ ಜ್ಞಾನದ ಕೊರತೆ ಇರಬಹುದು.

  • ಹಣಕಾಸು ಸಂಸ್ಥೆಗಳ ಕಡೆಗೆ ಅಷ್ಟಾಗಿ ಆಸಕ್ತಿ ಅಥವಾ ನಂಬಿಕೆ ಇಲ್ಲದೆ ಇರಬಹುದು.

ಆದರೆ ಇದು ಮೂರರಲ್ಲಿ ಕೇವಲ ಎರಡು ಭಾಗದಷ್ಟು ಕಥೆ ಮಾತ್ರ, ಮೂರನೆಯದು ಅಂದರೆ ?

ಆತ್ಮವಿಶ್ವಾಸ.

ಬಹುಆಯ್ಕೆಯ ಪ್ರಶ್ನೆಗಳ ಮೂಲಕ ಹಲವು ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿದಾಗ ಸಾಕಷ್ಟು ಮಹಿಳೆಯರ ಉತ್ತರ "ನನಗೆ ಗೊತ್ತಿಲ್ಲ" ಎಂಬುದೇ ಆಗಿತ್ತು.

ರಾಷ್ಟ್ರೀಯ ಬ್ಯೂರೋ ಆರ್ಥಿಕ ಸಂಶೋಧನೆಯ ವರದಿಯ ಪ್ರಕಾರ ವಿವಿಧ ಆಯಾಮಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹಣಕಾಸಿನ ಸಾಕ್ಷರತೆಯ ಪರೀಕ್ಷೆಗಳಲ್ಲಿ ತುಂಬಾ ಕಡಿಮೆ ಅಂಕ ಪಡೆದಿದ್ದಾರೆ.

ಏಕೆಂದರೆ ಮಹಿಳೆಯರು ತಮಗೆ ಬಂದಂತಹ ಸಾಕಷ್ಟು ಪ್ರಶ್ನೆಗಳಿಗೆ ತಪ್ಪು ಉತ್ತರಗಳನ್ನು ಅಥವಾ "ತಮಗೆ ಗೊತ್ತಿಲ್ಲ" ಎನ್ನುವ ಆಯ್ಕೆಗಳನ್ನು ಉತ್ತರವಾಗಿ ನೀಡಿದ್ದಾರೆ.

ಯಾವ ಪ್ರಶ್ನೆಗಳಿಗೆ " ನನಗೆ ಗೊತ್ತಿಲ್ಲ" ಎಂಬ ಆಯ್ಕೆ ಇಲ್ಲದೆ ಇತ್ತು ಅಂತಹ ಪ್ರಶ್ನೆಗಳಿಗೆ ಮಹಿಳೆಯರು ಸರಿಯಾದ ಉತ್ತರದ ಆಯ್ಕೆಯನ್ನು ಮಾಡಿದ್ದಾರೆ.

ಹಾಗಾಗಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕಡಿಮೆ ಹಣಕಾಸಿನ ಸಾಕ್ಷರತೆ ಹೊಂದಿದ್ದಾರೆ ಎಂಬುದು ಪರೀಕ್ಷೆಯ ಮೂಲಕ ತಿಳಿಯಿತು. ಇಂತಹ ಮಹಿಳೆಯರು ನಿಜ ಜೀವನದಲ್ಲಿ ಹಣಕಾಸಿನ ನಿರ್ವಹಣೆಯಲ್ಲಿ ಸಂಪೂರ್ಣ ಆತ್ಮವಿಶ್ವಾಸವನ್ನು ಹೊಂದಲು ಹೇಗೆ ಸಾಧ್ಯ ಅಲ್ಲವೇ?

ಬಂಡವಾಳ ಹೂಡಿಕೆಯ ಆಯಾಮದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಕೂಡ ಶೇಕಡ 30% ಪುರುಷರಿಗೆ ಹೋಲಿಸಿದರೆ 55% ಮಹಿಳೆಯರು "ನನಗೆ ಗೊತ್ತಿಲ್ಲ" ಎಂಬ ಆಕೆಯನ್ನು ನೀಡಿದ್ದಾರೆ.

62% ಪುರುಷರು 34% ಮಹಿಳೆಯರಿಗೆ ಹೋಲಿಸಿದರೆ ಸರಿಯಾದ ಉತ್ತರ ನೀಡಿದ್ದಾರೆ. ಇಲ್ಲಿ 28% ಅಂತರವನ್ನು ಗಮನಿಸಬಹುದು.

ಬಂಡವಾಳ ಹೂಡಿಕೆಯ ತೊಂದರೆಗಳ ಪ್ರಶ್ನೆಗಳನ್ನು ಕೇಳಲಾದ ಸಂದರ್ಭದಲ್ಲಿ 82% ಪುರುಷರು 73% ಮಹಿಳೆಯರಿಗೆ ಹೋಲಿಸಿದರೆ ಸರಿಯಾದ ಉತ್ತರ ನೀಡಿದ್ದಾರೆ. ಇಲ್ಲಿ ಶೇಕಡ 9% ಅಂತರವನ್ನು ಗಮನಿಸಬಹುದು.

ಹೀಗಾಗಿ ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆಯ ಆತ್ಮವಿಶ್ವಾಸದ ಕುಂದುಕೊರತೆ ಎದ್ದು ಕಾಣುತ್ತಿದೆ.

ಇದೊಂದು ಗಂಭೀರವಾಗಿ ಗಮನಿಸಬೇಕಾದ ವಿಚಾರವಾಗಿದ್ದು, ಸಂಶೋಧಕರ ಪ್ರಕಾರ ಮಹಿಳೆಯರ ಆರ್ಥಿಕ ಜ್ಞಾನದ ಅಭಿವೃದ್ಧಿಗೆ ನೆರವಾಗುವಂತಹ ಸಾಕಷ್ಟು ಕಾರ್ಯಕ್ರಮಗಳು ಪುರುಷರು ಹಾಗೂ ಮಹಿಳೆಯರ ನಡುವಿನ ಆರ್ಥಿಕ ಸಾಕ್ಷರತೆಯ ಅಂತರವನ್ನು ಕಡಿಮೆ ಮಾಡಲು ಸಶಕ್ತವಾಗಿಲ್ಲ. ಏಕೆಂದರೆ ಇಬ್ಬರಿಗೂ ಈ ವಿಚಾರದಲ್ಲಿ ಆತ್ಮವಿಶ್ವಾಸದ ಕೊರತೆ ಸಾಕಷ್ಟಿದೆ.

ಮಹಿಳೆಯರ ಆರ್ಥಿಕ ಯೋಗಕ್ಷೇಮಕ್ಕೆ ಅಡೆತಡೆಗಳು: ಕಡಿಮೆ ಆರ್ಥಿಕ ಜ್ಞಾನ, ಆತ್ಮವಿಶ್ವಾಸ ಮತ್ತು ಫಲಿತಾಂಶಗಳು

ಪುರುಷರು ಮತ್ತು ಮಹಿಳೆಯರ ನಡುವಿನ ಹಣಕಾಸಿನ ಸಾಕ್ಷರತೆಯ ಅಂತರದ ಕಾರಣದಿಂದ ಮಹಿಳೆಯರು ಮತ್ತಷ್ಟು ಅಭಿವೃದ್ಧಿ ಕಾಣಬೇಕಾಗಿದೆ.

ಬಹುತೇಕ ಎಲ್ಲಾ ಸಂಶೋಧನೆಗಳು ಹೇಳುವ ಹಾಗೆ ದೇಶ ಈಗಾಗಲೇ ಅಭಿವೃದ್ಧಿ ಆಗಿರಲಿ ಅಥವಾ ಇನ್ನೂ ಅಭಿವೃದ್ಧಿ ಕಾಣುತ್ತಿರಲಿ, ಪ್ರಪಂಚದ ಎಲ್ಲಾ ದೇಶಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹಣಕಾಸಿನ ವಿಚಾರದಲ್ಲಿ ಕಡಿಮೆ ಅರಿವು ಮತ್ತು ಜ್ಞಾನ ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ.

  • ಈಗಿನ ಓದಿರುವ ಮತ್ತು ದುಡಿಯುವ ಮಹಿಳೆಯರಿಗೆ ಹೋಲಿಸಿದರೆ ಹಿಂದಿನ ಮಹಿಳೆಯರು ಚಿಕ್ಕವಯಸ್ಸಿನಿಂದ ಸಮರ್ಪಕ ರೀತಿಯಲ್ಲಿ ಶಿಕ್ಷಣ ಪಡೆಯದೇ ಇರುವುದು ಮತ್ತು ಕಡಿಮೆ ಆದಾಯ ಹೊಂದಿರುವುದು ಅವರಲ್ಲಿ ಆರ್ಥಿಕ ಸಾಕ್ಷರತೆಯ ಗುಣಮಟ್ಟ ಕುಸಿಯುವಂತೆ ಮಾಡುತ್ತಿದೆ.

  • ಮಹಿಳೆಯರು ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುವುದು ಮತ್ತು ಬಂಡವಾಳ ಹೂಡಿಕೆ ಮಾಡುವಲ್ಲಿ ಕಡಿಮೆ ಅರಿವು ಮತ್ತು ಜ್ಞಾನವನ್ನು ಹೊಂದಿರುತ್ತಾರೆ ಎಂಬುದು ಎಷ್ಟು ಸತ್ಯವೋ ಅವರಿಗೆ ಹಣಕಾಸಿನ ವಿಚಾರಗಳಲ್ಲಿ ಆಸಕ್ತಿ ಕಡಿಮೆ ಇದೆ ಎನ್ನುವುದು ಕೂಡ ಅಷ್ಟೇ ಸತ್ಯ. ಪುರುಷರಿಗೆ ಹೋಲಿಸಿದರೆ ಹಣಕಾಸಿನ ನಿರ್ವಹಣೆಯ ಕೌಶಲ್ಯ ಮತ್ತು ಜ್ಞಾನದ ಮಟ್ಟಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಇನ್ನೂ ಸಹ ಹೆಚ್ಚಿನ ಅಂತರವನ್ನು ಕಾಯ್ದುಕೊಂಡಿದ್ದಾರೆ.

  • ಬಂಡವಾಳ ಹೂಡಿಕೆ ಮಾಡುವಲ್ಲಿ, ಹಣಕಾಸಿನ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಹೊಂದುವಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸಾಕಷ್ಟು ದುರ್ಬಲರಾಗಿದ್ದಾರೆ ಎಂದು ಸಂಶೋಧನೆ ಹೇಳುತ್ತದೆ. ಹಣಕಾಸಿಗೆ ಸಂಬಂಧಪಟ್ಟ ಕೇವಲ ಸಣ್ಣ ಪುಟ್ಟ ಆಯಾಮಗಳಲ್ಲಿ ಮಾತ್ರ ಮಹಿಳೆಯರು ಆಲೋಚನೆ ಮಾಡುವುದರಿಂದ ಸಮಾಜದಲ್ಲಿ ಇಂದಿಗೂ ಸಹ ಪುರುಷರು ಹಾಗೂ ಮಹಿಳೆಯರ ನಡುವೆ ಹಣಕಾಸಿನ ಸಾಕ್ಷರತೆಯ ಅಂತರ ಹೆಚ್ಚಾಗಿದೆ. ಹೀಗಾಗಿ ಮಹಿಳೆಯರು ಎಲ್ಲಾ ಸಮಯದಲ್ಲಿ ಕಡಿಮೆ ಆದಾಯ ಹೊಂದಿರುತ್ತಾರೆ.

  • ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಆಯಸ್ಸು ಹೆಚ್ಚಾಗಿದ್ದರೂ ಕೂಡ ಅವರು ತಮ್ಮ ನಿವೃತ್ತಿ ವಯಸ್ಸಿನ ನಂತರದಲ್ಲಿ ತಮ್ಮ ದುಡಿದ ಹಣದ ಸದುಪಯೋಗ ಮಾಡಿಕೊಳ್ಳಲು ಮೊದಲಿನಿಂದಲೇ ಹಣ ಉಳಿಸುವ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸಾಕಷ್ಟು ಮಹಿಳೆಯರು ಹಣ ಉಳಿಸಲು ಮುಂದಾಗುತ್ತಾರೆ ಆದರೆ ಇದು ಹಲವು ಆಯಾಮಗಳಲ್ಲಿರುವುದರಿಂದ ಆದಾಯದ ಕೊರತೆ ಮತ್ತು ಬಡ್ಡಿದರದ ಜಮೆ ಕಡಿಮೆಯಾಗುವಂತೆ ಮಾಡುತ್ತದೆ.

  • ಇನ್ನು ದೊಡ್ಡ ದೊಡ್ಡ ಹಣಕಾಸಿನ ನಿರ್ಧಾರಗಳನ್ನು ಕೈಗೊಳ್ಳಲು ಮಹಿಳೆಯರು ದುರ್ಬಲರಾಗಿದ್ದಾರೆ. ಕೇವಲ ಮನೆಗೆ ಸಂಬಂಧಪಟ್ಟಂತೆ ದಿನಸಿ ವಸ್ತುಗಳನ್ನು ಅಥವಾ ಮನೆಯ ಉಪಕರಣಗಳನ್ನು ತೆಗೆದುಕೊಳ್ಳುವ ಮಟ್ಟಿಗೆ ಮಾತ್ರ ಮಹಿಳೆಯರು ಸಮರ್ಪಕವಾಗಿ ಆಲೋಚನೆ ಮಾಡಬಲ್ಲರು. ಉಳಿದಂತೆ ಮನೆ ಸಾಲ, ವಿಮೆ, ಕಾರು ಖರೀದಿ ಇತ್ಯಾದಿ ದೊಡ್ಡ ದೊಡ್ಡ ವಿಚಾರಗಳಲ್ಲಿ ಮನೆಯ ಯಜಮಾನರಾಗಿ ಪುರುಷರು ಆತ್ಮವಿಶ್ವಾಸದಿಂದ ನಿರ್ಧಾರ ಕೈಗೊಂಡು ಮುಂದುವರೆಯುತ್ತಾರೆ.

ಮೇಲಿನ ಎಲ್ಲಾ ಕಾರಣಗಳು ಮಹಿಳೆಯರ ಆರ್ಥಿಕ ದುರ್ಬಲತೆಗಳು ಸಮಾಜದಲ್ಲಿ ಹಣಕಾಸಿಗೆ ಸಂಬಂಧಪಟ್ಟಂತೆ ಇರುವ ವಿವಿಧ ಆದಾಯದ ಮಜಲುಗಳಿಂದ ಮಹಿಳೆಯರನ್ನು ದೂರ ಇರಿಸುವ ಕನ್ನಡಿಗಳಾಗಿ ರೂಪುಗೊಂಡಿವೆ.

ಮದುವೆಯಾದ ಹೆಂಗಸರು ಮನೆಗೆ ಸಂಬಂಧಪಟ್ಟಂತೆ ಕೆಲಸ ಕಾರ್ಯಗಳನ್ನು ಮತ್ತು ಹಣಕಾಸಿನ ನಿರ್ವಹಣೆಯನ್ನು ಮಾಡಲು ಮಾತ್ರ ಸೀಮಿತವಾಗಿರುವುದರಿಂದ ಬಂಡವಾಳ ಹೂಡಿಕೆ ಮತ್ತು ಆದಾಯ ಗಳಿಕೆಗೆ ಸಂಬಂಧಪಟ್ಟಂತೆ ಕಡಿಮೆ ಜ್ಞಾನವನ್ನು ಹೊಂದಿರುತ್ತಾರೆ.

ಈ ಒಂದು ಅಸಮತೋಲನವನ್ನು ಸಮಾಜದಿಂದ ಹೋಗಲಾಡಿಸಲು ಯೋಜನೆಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ. ಮಹಿಳೆಯರಿಗೆ ಆರ್ಥಿಕತೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಪುರುಷರು ಮತ್ತು ಮಹಿಳೆಯರು ಎಂಬ ತಾರತಮ್ಯವನ್ನು ಪಕ್ಕಕ್ಕಿಟ್ಟು ಪುರುಷರಷ್ಟೇ ಸರಿಸಮಾನವಾಗಿ ಮಹಿಳೆಯರಿಗೂ ಕೂಡ ಹಣಕಾಸಿನ ವಿವಿಧ ಆದಾಯದ ಆಯ್ಕೆಗಳು ಸಿಗುವಂತೆ ಮಾಡಬೇಕು. ಇದರಿಂದ ಸಾಕಷ್ಟು ಮಹಿಳೆಯರಿಗೆ ತಮ್ಮ ಆರ್ಥಿಕ ಜೀವನ ಸುಧಾರಿಸುತ್ತದೆ.

ಇಂತಹ ತೊಂದರೆಗಳನ್ನು ಹೇಗೆ ಸರಿಪಡಿಸಬಹುದು?

ವಯಸ್ಸು, ವಿದ್ಯಾಭ್ಯಾಸದ ಮಟ್ಟ, ವೈವಾಹಿಕ ಜೀವನದ ಸ್ಥಿತಿಗತಿ, ಆದಾಯದ ಮಟ್ಟಗಳನ್ನು ಮೀರಿದಂತೆ ಆರ್ಥಿಕ ಸಾಕ್ಷರತೆ ವಿಚಾರದಲ್ಲಿ ಈಗಲೂ ಕೂಡ ಪುರುಷರು ಮತ್ತು ಮಹಿಳೆಯರು ಎನ್ನುವ ಭೇದ ಭಾವ ಎಲ್ಲಾ ಕಡೆ ಸಾಕಷ್ಟು ತೊಂದರೆದಾಯಕವಾಗಿ ಕಂಡುಬರುತ್ತಿದೆ.

ಅಭಿವೃದ್ಧಿ ಮತ್ತು ಅನುಷ್ಠಾನದ ಪ್ರಕ್ರಿಯೆಯಲ್ಲಿ ಪಾಲುದಾರರು ಮತ್ತು ಇತರರಿಗೆ ಸಹಾಯ ಮಾಡುವ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಸಂಶೋಧಕರು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ.

ಅವರ ಶಿಫಾರಸುಗಳು ಇಂತಿವೆ:

  1. ಮೊದಲಿಗೆ ಮಹಿಳೆಯರಿಗೆ ಹಣಕಾಸಿಗೆ ಸಂಬಂಧಪಟ್ಟಂತೆ ಉತ್ತಮ ವಿದ್ಯಾಭ್ಯಾಸ ಸಿಗುವಲ್ಲಿ ಆಗುತ್ತಿರುವ ತೊಂದರೆಗಳನ್ನು ಕಂಡುಹಿಡಿದು ಅವರಿಗೆ ಹಣಕಾಸಿನ ಸಾಕ್ಷರತೆಯ ಅರಿವು ಮೂಡಿಸುವುದರ ಜೊತೆ ಸಾಮಾಜಿಕ ಜವಾಬ್ದಾರಿಗಳನ್ನು ಅರ್ಥ ಮಾಡಿಸಿ ಮಹಿಳೆಯರ ಸಬಲೀಕರಣಕ್ಕೆ ಸಹಾಯ ಮಾಡುವಂತಹ ಕಾಯ್ದೆ ಹಾಗೂ ಕಾನೂನು ವಿಚಾರಗಳನ್ನು ತಿಳಿಸಿ ಹೇಳುವುದರ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಲು ಬೇಕಾದಂತಹ ಜ್ಞಾನವನ್ನು ನೀಡಬೇಕು. ಇದರಿಂದ ಒಬ್ಬ ಮಹಿಳೆ ಹಣಕಾಸಿನ ನಿರ್ವಹಣೆಯ ಉತ್ತಮ ಜ್ಞಾನ ಪಡೆಯಲು ಅನುಕೂಲವಾಗುತ್ತದೆ.

  1. ಜನಸಂಖ್ಯೆಯ ಆಧಾರದ ಮೇಲೆ ಮಹಿಳೆಯರಿಗೆ ಹಾಗೂ ಹುಡುಗಿಯರಿಗೆ ಇರುವಂತಹ ವಿವಿಧ ಹಣಕಾಸಿನ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು ಮೊದಲ ಆದ್ಯತೆ ಆಗಬೇಕು.

  1. ಮಹಿಳೆಯರಿಗೆ ಸಮರ್ಪಕವಾಗಿ ಹಣಕಾಸಿನ ನಿರ್ವಹಣೆ ಮಾಡಲು ಜೊತೆಗೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಅವಶ್ಯಕತೆಗಳನ್ನು ಮತ್ತು ಅಗತ್ಯತೆಗಳನ್ನು ಅಂಗೀಕರಿಸಿ. ಇದರಿಂದ ಮಹಿಳೆಯರಿಗೆ ಹಣ ಉಳಿತಾಯ ಮಾಡುವಲ್ಲಿ, ಹಣಕಾಸಿಗೆ ಸಂಬಂಧಪಟ್ಟಂತೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅರಿವು ಹೆಚ್ಚಾಗುತ್ತದೆ. ಗೊತ್ತಿಲ್ಲದೆ ಇರುವಂತಹ ವಿಚಾರಗಳನ್ನು ಕೇಳಿ ತಿಳಿದುಕೊಳ್ಳಲು ಸಹ ಅನುಕೂಲವಾಗುತ್ತದೆ.

  1. ಸಾರ್ವಜನಿಕ, ಖಾಸಗಿ ಹಾಗೂ ನಾಗರಿಕ ಸಂಸ್ಥೆಗಳ ಜೊತೆ ಸಮನ್ವಯ ಸಾಧಿಸುವ ಮತ್ತು ಬಂಡವಾಳ ಹೂಡಿಕೆ ಮಾಡುವ ಜ್ಞಾನವನ್ನು ಮಹಿಳೆಯರಿಗೆ ನೀಡುತ್ತಾ ಬಂದರೆ ಕ್ರಮೇಣವಾಗಿ ಸಮಾಜದಲ್ಲಿ ಪುರುಷರು ಹಾಗೂ ಮಹಿಳೆಯರು ಎಂಬ ತಾರತಮ್ಯ ಕಡಿಮೆಯಾಗುತ್ತದೆ ಜೊತೆಗೆ ಹಣಕಾಸಿನ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಮಹಿಳೆಯರು ಸ್ವಾವಲಂಬಿಯಾಗಿತ್ತಾರೆ.

  1. ಮಹಿಳೆಯರಿಗೆ ಹಣಕಾಸಿನ ಸಾಕ್ಷರತೆಯ ವಿಚಾರಗಳನ್ನು ಯಾವೆಲ್ಲ ಮೂಲಗಳಿಂದ ತಿಳಿಸಿ ಹೇಳಬಹುದು ಎಂಬ ಬಗ್ಗೆ ಆಲೋಚನೆ ಮಾಡಿ, ಶಾಲೆಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ, ಮಹಿಳೆಯರ ಹಾಗೂ ಹುಡುಗಿಯರ ಗುಂಪುಗಳಲ್ಲಿ ಈ ವಿಚಾರಕ್ಕೆ ಒತ್ತು ನೀಡುವುದು ಉತ್ತಮ ಅಭ್ಯಾಸ.

ಆರ್ಥಿಕ ಸಾಕ್ಷರತೆಗೆ ಸಂಬಂಧಿಸಿದಂತೆ ಪುರುಷರು ಮತ್ತು ಮಹಿಳೆಯರ ನಡುವಿನ ಈ ಅಂತರಕ್ಕೆ ಆರ್ಥಿಕ ಜ್ಞಾನದ ಕೊರತೆ ಮಾತ್ರ ಕಾರಣ ಎಂದು ಹೇಳಲಾಗುವುದಿಲ್ಲ. 

ಕಡಿಮೆ ಆದಾಯ ಮತ್ತು ಕಡಿಮೆ ಹಣಕಾಸಿನ ಅವಕಾಶಗಳು ಸಹ ಇದಕ್ಕೆ ಕಾರಣವಾಗುತ್ತವೆ. ಆತ್ಮವಿಶ್ವಾಸದ ಕೊರತೆ ಮತ್ತು ಆರ್ಥಿಕ ಕಾರ್ಯ ನಿರ್ವಹಣೆಯಲ್ಲಿ ಒಳಗೊಳ್ಳುವುದು ಸಹ ಪುರುಷರು ಹಾಗೂ ಮಹಿಳೆಯರ ನಡುವಿನ ಆರ್ಥಿಕ ಸಾಕ್ಷರತೆಯ ದರದ ಮೇಲೆ ಪರಿಣಾಮ ಬೀರುವ ಎರಡು ಅಂಶಗಳಾಗಿವೆ.

ಈ ಮೇಲಿನ ಎಲ್ಲಾ ಕಾರಣಗಳು ಮಹಿಳೆಯರಿಗೆ ಆರ್ಥಿಕ ಸಾಕ್ಷರತೆಯ ಅವಶ್ಯಕತೆ ಎಷ್ಟಿದೆ ಎಂಬುದನ್ನು ತೋರಿಸುತ್ತವೆ. ಹೀಗಾಗಿ ಮಹಿಳೆಯರಿಗೆ ಹಣಕಾಸಿನ ವಿಚಾರದಲ್ಲಿ ಅರಿವು ಮೂಡಿಸುವ ಕೆಲಸವನ್ನು ಈಗಲೇ ಮಾಡಬೇಕಾಗಿದೆ.

Subscribe to our newsletter
Thank you! Your submission has been received!
Oops! Something went wrong while submitting the form.